







ಸುಳ್ಯ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಹಾಗೂ ಐತಿಹಾಸಿಕ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ 3 ವರ್ಷಗಳು ಪೂರ್ಣಗೊಂಡಿರುವ ಐತಿಹಾಸಿಕ ಸಂದರ್ಭದ ಸವಿನೆನಪಿಗಾಗಿ, ಸುಳ್ಯ ತಾಲೂಕಿನ ಮುರುಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಿನಾಂಕ 03/08/2026 ರಂದು ಹಣ್ಣಿನ ಗಿಡ ನೆಡುವ ವಿನೂತನ ಹಾಗೂ ಪರಿಸರಸ್ನೇಹಿ ಕಾರ್ಯಕ್ರಮವನ್ನು ಬಹಳ ಸಂಭ್ರಮದಿಂದ ಹಮ್ಮಿಕೊಳ್ಳಲಾಯಿತು.
ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಮುಖಂಡರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು. ಸುಳ್ಯ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರು ಹಾಗೂ ಮುರುಳ್ಯ ಗ್ರಾಮ ಪಂಚಾಯತ್ ಉಸ್ತುವಾರಿಗಳಾದ ಶ್ರೀಯುತ ಅಬ್ಬಾಸ್ ಎ. ಬಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಹಾಗೆಯೇ ಮುರುಳ್ಯ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾದ ಶ್ರೀ ಗೋಪಾಲಕೃಷ್ಣ ಕೆ. ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಪಂಚಾಯತ್ ಸಿಬ್ಬಂದಿಗಳು, ಅಂಗನವಾಡಿ ಮೇಲ್ವಿಚಾರಕರು, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಗೃಹಲಕ್ಷ್ಮಿ ಯೋಜನೆಯ ಮಹಿಳಾ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಿದರು. ಮಹಿಳಾ ಸಬಲೀಕರಣದ ಪ್ರತೀಕವಾದ ಗೃಹಲಕ್ಷ್ಮಿ ಯೋಜನೆಯು ಮೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆಯಲ್ಲಿ, ಮುರುಳ್ಯ ಗ್ರಾಮ ಪಂಚಾಯತ್ ವತಿಯಿಂದ ಪ್ರಕೃತಿ ಮಾತೆಗೆ ಹಸಿರು ಉಡುಗೊರೆ ನೀಡುವ ಉದ್ದೇಶದಿಂದ ಹಣ್ಣಿನ ಗಿಡಗಳನ್ನು ನೆಡುವ ಸತ್ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವು ನೆರೆದಿದ್ದ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

