ಇಲಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಕಾಇಂಗಾಡ್ ಸಮೀಪದ ಪಡನ್ನಕ್ಕಾಡ್ನಲ್ಲಿ ನಡೆದಿದೆ. ಮೃತರನ್ನು ಕಾಇಂಗಾಡ್ ಪಡನ್ನಕ್ಕಾಡ್ ಸಿಯಾರತ್ತಿಂಕ್ಕರ ಹೆಲ್ತ್ ಸೆಂಟರ್ ಸಮೀಪದ ನಿವಾಸಿ ಎಂ.ಕೆ. ಅಬ್ದುಲ್ ರಹ್ಮಾನ್ ಅವರ ಪುತ್ರಿ ಎಂ.ಕೆ. ತಾಹಿರ (35) ಎಂದು ಗುರುತಿಸಲಾಗಿದೆ.
ಜುಲೈ 28ರಂದು ತಾಹಿರ ಅವರಿಗೆ ಹೊಟ್ಟೆನೋವು ಹಾಗೂ ವಾಂತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಇಂಗಾಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ತಪಾಸಣೆ ವೇಳೆ ತಾನು ಇಲಿ ವಿಷ ಸೇವಿಸಿರುವುದಾಗಿ ಅವರು ತಿಳಿಸಿದ್ದರು ಎನ್ನಲಾಗಿದೆ.
ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಂದ ಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ಈ ಸಂಬಂಧ ಹೊಸದುರ್ಗ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.








