


ಈ ದಿನ ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಕರೆಯಲಾಯಿತು. ಗೋಷ್ಠಿಯನ್ನು ಉದ್ದೇಶಿಸಿ ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ಸಂಯೋಜಕ ಕೆ. ಪಿ. ಜಾನಿ ಅವರು ಕೇಂದ್ರದ ಬಿಜೆಪಿ ಸರ್ಕಾರದ ನೀತಿಗಳು ಹಾಗೂ ಇತ್ತೀಚಿನ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನೀಟ್ ಪ್ರಶ್ನೆಪತ್ರಿಕೆಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಿಕೊಟ್ಟು ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡಲಾಗಿದೆ. ಈ ಅಕ್ರಮಕ್ಕೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಕೆ. ಪಿ. ಜಾನಿ ಆಗ್ರಹಿಸಿದರು.
ಸಂಪತ್ತು, ಅಧಿಕಾರ ಮತ್ತು ವಿದ್ಯೆ ಈ ಮೂರೂ ಎಲ್ಲರಿಗೂ ತಲುಪಬೇಕು ಎಂಬ ಆಶಯಕ್ಕೆ ಬಿಜೆಪಿ ಸಂಪೂರ್ಣ ವಿರುದ್ಧವಾಗಿದೆ. ವಿದ್ಯೆ, ಸಂಪತ್ತು ಹಾಗೂ ಅಧಿಕಾರ ಕೆಲವೇ ಶ್ರೀಮಂತರ ಮತ್ತು ಪ್ರಭಾವಿಗಳ ಕೈಯಲ್ಲಿ ಶಾಶ್ವತವಾಗಿ ಉಳಿಯಬೇಕು ಎನ್ನುವ ಅಸಮಾನತೆಯ ಸಿದ್ಧಾಂತವನ್ನು ಜಾರಿಗೆ ತರಲು ಬಿಜೆಪಿ ಯತ್ನಿಸುತ್ತಿದೆ. ಕಳೆದ 12 ವರ್ಷಗಳ ಬಿಜೆಪಿ ಆಡಳಿತದಲ್ಲಿ ಬಡವರಿಂದ ಶಿಕ್ಷಣ ಮತ್ತು ಅಧಿಕಾರವನ್ನು ಕಸಿದುಕೊಳ್ಳುವ ಪ್ರಯತ್ನ ನಡೆದಿದೆ. ಜನರ ಗಮನವನ್ನು ಅಸಲಿ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯಲು ಧರ್ಮ, ಜಾತಿ ಹಾಗೂ ಹಿಂದು-ಮುಸ್ಲಿಂ ವಿಷಯಗಳನ್ನು ವಿಭಜಕ ಉಪಕರಣಗಳಾಗಿ ಬಳಸಿಕೊಂಡು ಜನರನ್ನು ಮರುಳು ಮಾಡಲಾಗುತ್ತಿದೆ ಎಂದು ಅವರು ದೂರಿದರು.
ಅಯೋಧ್ಯೆಯ ರಾಮಮಂದಿರದ ಖಜಾನೆ ಲೂಟಿ, ರಫೇಲ್ ಕಡತಗಳ ನಾಪತ್ತೆ, ನೋಟು ಅಮಾನ್ಯೀಕರಣ, ಕಪ್ಪು ಹಣ ತರುವಲ್ಲಿ ವೈಫಲ್ಯ, ರೈತರ ಆದಾಯ ದ್ವಿಗುಣಗೊಳಿಸದಿರುವುದು, ಚುನಾವಣಾ ಆಯೋಗದ ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಹೊರಗಿಟ್ಟಿದ್ದು, ಮಣಿಪುರ ಹಿಂಸಾಚಾರ ನಿರ್ವಹಣೆ ಹಾಗೂ ಇತ್ತೀಚಿನ SIR ಜಾರಿ ಮುಂತಾದ ವಿಷಯಗಳು ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತವೆ. ಆದ್ದರಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಗೌರವಿಸದ ಕೋಮುವಾದಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಎಲ್ಲಾ ಸಮಾನಮನಸ್ಕರು ಒಂದಾಗಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಕರೆ ನೀಡಲಾಯಿತು.
ಈ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ವಸಂತ ಪೆಲ್ತಡ್ಕ, ಕಾರ್ಯದರ್ಶಿ ಲುಕಾಸ್ ಟಿ. ಐ., ಸಂಪಾಜೆ ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಲನ ಕೆ. ಆರ್., ಉಪಾಧ್ಯಕ್ಷೆ ಪ್ರಮೀಳಾ ಪೆಲ್ತಡ್ಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಜ್ಞಾನಶೀಲನ್ ಉಪಸ್ಥಿತರಿದ್ದರು.


