ಸಂಪಾಜೆಯ ಫಾತಿಮತ್ ನಿಶಾನ ಅವರ ಅನುಮಾನಾಸ್ಪದ ಸಾವು – ಸಮಗ್ರ ತನಿಖೆಗೆ ವಿಮೆನ್ ಇಂಡಿಯಾ ಮೂವ್ಮೆಂಟ್ ಆಗ್ರಹ

 

▪️ಪ್ರಭಾವಿ ನಾಯಕರ ಮೌನ: ಆರೋಪಿಗಳನ್ನು ರಕ್ಷಿಸಲು ತೆರೆಮರೆಯ ಪ್ರಯತ್ನ ನಡೆಯುತ್ತಿದೆಯೇ? : ಸಬೀನಾ ಎ ಎಸ್

ಸುಳ್ಯ: ತಾಲೂಕಿನ ಸಂಪಾಜೆಯಲ್ಲಿ ಜುಲೈ 18 ರಂದು ನಡೆದ 22 ವರ್ಷದ ವಿವಾಹಿತೆ ಫಾತಿಮತ್ ನಿಶಾನ ಅವರ ಸಾವಿನ ಪ್ರಕರಣವು ಅತ್ಯಂತ ದುರದೃಷ್ಟಕರ ಹಾಗೂ ಗಂಭೀರ ಸ್ವರೂಪದ್ದಾಗಿದೆ. ಇದು ಕೇವಲ ಸಾವು ಅಥವಾ ಆತ್ಮಹತ್ಯೆಯಲ್ಲ, ಬದಲಾಗಿ ವ್ಯವಸ್ಥಿತವಾಗಿ ನಡೆದ ಹತ್ಯೆ ಎಂಬ ಮೃತಳ ಕುಟುಂಬಸ್ಥರ ಸಂಶಯಕ್ಕೆ ಪುಷ್ಟಿ ನೀಡುವಂತಹ ಅನೇಕ ಅಂಶಗಳು ಮೇಲ್ನೋಟಕ್ಕೆ ಕಂಡುಬರುತ್ತಿವೆ. ಈ ಪ್ರಕರಣವನ್ನು ಪೋಲಿಸ್ ಇಲಾಖೆ ಸಮಗ್ರವಾಗಿ ತನಿಖೆ ನಡೆಸಿ ಸಂತ್ರಸ್ತ ಕುಟುಂಬಕ್ಕೆ ಶೀಘ್ರ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷೆ ಸಬೀನಾ ಎ ಎಸ್‌ ರವರು ಒತ್ತಾಯಿಸಿದ್ದಾರೆ.

​ನಿಶಾನ ಅವರು ಸಾವನ್ನಪ್ಪುವ ಕೆಲವೇ ಕ್ಷಣಗಳ ಮೊದಲು ತಮ್ಮ ತಾಯಿಗೆ ಕರೆ ಮಾಡಿ, ಗಂಡನ ಮನೆಯವರಿಂದ ತಮಗೆ ನಿರಂತರವಾಗಿ ನಡೆಯುತ್ತಿದ್ದ ದೈಹಿಕ ಮತ್ತು ಮಾನಸಿಕ ಕಿರುಕುಳದ ಬಗ್ಗೆ ಅಳಲು ತೋಡಿಕೊಂಡಿದ್ದರು. ಮೃತದೇಹವನ್ನು ತರಾತುರಿಯಲ್ಲಿ ಸಾಗಿಸಿದ್ದು ಮತ್ತು ಘಟನಾ ಸ್ಥಳದಲ್ಲಿದ್ದವರು ನೀಡಿದ ಗೊಂದಲಮಯ ಹೇಳಿಕೆಗಳು ಪ್ರಕರಣವನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನವನ್ನು ಬಲಪಡಿಸುತ್ತಿದೆ.
​ವಿಪರ್ಯಾಸವೆಂದರೆ, ಈ ಪ್ರಕರಣದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದರೂ, ವಿಚಾರಣೆ ನಡೆಸಿ ಅವರನ್ನು ಬಿಡುಗಡೆ ಮಾಡಲಾಗಿದೆ. ಇದು ಪೊಲೀಸ್ ಇಲಾಖೆಯ ತನಿಖೆಯ ಬಗೆಗೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಒಂದು ವೇಳೆ ಆತ್ಮಹತ್ಯೆಯೇ ಆಗಿದ್ದರೂ, ಅದಕ್ಕೆ ಪ್ರಚೋದನೆ ನೀಡಿದವರು ಆಕೆಯ ಮಾವ,ಅತ್ತೆ ಹಾಗೂ ನಾದಿನಿ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿರುವುದರಿಂದ ಹಾಗೂ ಆ ಊರಿನಲ್ಲಿ ರಾಜ್ಯ ಮಟ್ಟದ ಪ್ರಭಾವಿಯಾಗಿರುವ ಸ್ಥಾನಮಾನದ ಇರುವ ಹಲವು ನಾಯಕರು ಇದ್ದರು ಈ ಘಟನೆಯ ಬಗ್ಗೆ ಮೌನ ವಹಿಸಿರುವುದು ಆರೋಪಿಗಳನ್ನು ರಕ್ಷಿಸುವ ಕೆಲಸ ನಡೆಯುತ್ತಿದೆಯೆ ಎಂಬ ಸಂಶಯ ಸಾರ್ವಜನಿಕರೆಡೆಯಲ್ಲಿ ಮೂಡುತ್ತಿದೆ. ಹಾಗಾಗಿ ಆರೋಪಿಗಳನ್ನು ಪುನಃ ಬಂಧಿಸಿ ಜೈಲಿಗಟ್ಟಬೇಕು.

ವಿಮೆನ್ ಇಂಡಿಯಾ ಮೂವ್ಮೆಂಟ್ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯು ಈ ಪ್ರಕರಣದ ಕುರಿತು ಉನ್ನತ ಮಟ್ಟದ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸುತ್ತದೆ. ಮೃತ ಮಹಿಳೆ ಕೊನೆಯದಾಗಿ ಮಾಡಿದ ದೂರವಾಣಿ ಕರೆಗಳನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಬೇಕು, ಕುಟುಂಬಸ್ಥರು ನೀಡಿರುವ ದೂರಿನ ಆಧಾರದಲ್ಲಿ ಮರುತನಿಖೆ ನಡೆಸಿ, ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಯಾವುದೇ ರಾಜಕೀಯ ಅಥವಾ ಬಾಹ್ಯ ಪ್ರಭಾವಗಳಿಗೆ ಮಣಿಯದೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮೃತಳ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ರಾಜ್ಯ ಮಹಿಳಾ ಆಯೋಗ ಮತ್ತು ಪೊಲೀಸ್ ಇಲಾಖೆಯನ್ನು ಆಗ್ರಹಿಸುತ್ತೇವೆ.

​ಒಂದು ವೇಳೆ ತನಿಖೆ ವಿಳಂಬವಾದರೆ ಅಥವಾ ಆರೋಪಿಗಳಿಗೆ ಬೆಂಬಲ ನೀಡುವ ಪ್ರಯತ್ನ ನಡೆದರೆ ವಿಮೆನ್ ಇಂಡಿಯಾ ಮೂವ್ಮೆಂಟ್ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲು ಹಿಂಜರಿಯುವುದಿಲ್ಲ ಎಂದು ಸಬೀನಾ ಎ ಎಸ್‌ ರವರು ಎಚ್ಚರಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading