ಸುಳ್ಯ: ತೂಗುಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರ ನಿಧನಕ್ಕೆ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಡಾ. ಗಿರೀಶ್ ಭಾರದ್ವಾಜ್ ಅವರ ಅಗಲಿಕೆ ತಮಗೆ ವೈಯಕ್ತಿಕವಾಗಿ ಅತೀವ ನೋವನ್ನುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ 1996ರ ಅವಧಿಯ ನೆನಪುಗಳನ್ನು ಹಂಚಿಕೊಂಡಿರುವ ಅವರು, ತಾನು ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯನಾಗಿದ್ದ ಸಂದರ್ಭದಲ್ಲಿ ನನ್ನ ವಾರ್ಡಿನ ಪೇರಡ್ಕ ಭಾಗದ ಜನರು ಹೊಳೆಯನ್ನು ದಾಟಲು ಕೇವಲ ದೋಣಿಯನ್ನೇ ಅವಲಂಬಿಸಬೇಕಾಗಿತ್ತು. ಆ ಸಮಯದಲ್ಲಿ ಜನರ ಈ ಸಮಸ್ಯೆಯನ್ನು ಮನಗಂಡು, ಆಗಿನ ರಾಜ್ಯಸಭಾ ಸದಸ್ಯರಾಗಿದ್ದ ಶ್ರೀ ಬಿ. ಜನಾರ್ದನ ಪೂಜಾರಿ ಅವರಿಗೆ ತೂಗುಸೇತುವೆ ನಿರ್ಮಾಣಕ್ಕಾಗಿ ಮನವಿ ಸಲ್ಲಿಸಲಾಗಿತ್ತು. ಆ ಮನವಿಗೆ ಸ್ಪಂದಿಸಿದ ಜನಾರ್ದನ ಪೂಜಾರಿಯವರು ತಮ್ಮ ಸಂಸದರ ನಿಧಿಯಿಂದ ಸೇತುವೆ ನಿರ್ಮಾಣಕ್ಕೆ ಅನುದಾನವನ್ನು ಮಂಜೂರು ಮಾಡಿಕೊಟ್ಟಿದ್ದರು ಎಂದು ಸ್ಮರಿಸಿದ್ದಾರೆ.
ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡಿದ್ದ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ಅವರು, ಸೇತುವೆ ಕೆಲಸ ಪ್ರಗತಿಯಲ್ಲಿದ್ದಾಗ ಮಂಜೂರಾದ ಅನುದಾನಕ್ಕಿಂತ ಹೆಚ್ಚಿನ ವೆಚ್ಚದ ಅಗತ್ಯವಿದೆ ಎಂದು ತಿಳಿಸಿದ್ದರು. ಆದರೆ ಜನರು ಇನ್ನು ಮುಂದೆಯೂ ತೊಂದರೆ ಅನುಭವಿಸಬಾರದು ಎಂಬ ಮಾನವೀಯ ಕಾಳಜಿಯನ್ನು ಹೊಂದಿದ್ದ ಅವರು, ಹಣದ ಕೊರತೆಯ ನಡುವೆಯೂ ಕಾಮಗಾರಿಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿ ಜನರಿಗೆ ಸಮರ್ಪಿಸಿದರು.
ಆ ಬಳಿಕ ತಾವು ಶ್ರೀ ಬಿ. ಜನಾರ್ದನ ಪೂಜಾರಿ ಅವರಿಗೆ ಹೆಚ್ಚುವರಿ ಅನುದಾನಕ್ಕಾಗಿ ಪುನಃ ಮನವಿ ಸಲ್ಲಿಸಿದ್ದು, ಅದರಂತೆ ಹೆಚ್ಚುವರಿ ಅನುದಾನ ಮಂಜೂರಾಗಿ ಡಾ. ಗಿರೀಶ್ ಭಾರದ್ವಾಜ್ ಅವರು ತಮ್ಮ ಕೈಯಿಂದ ಭರಿಸಿದ್ದ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲಾಯಿತು ಎಂದು ಮಹಮ್ಮದ್ ಕುಂಞಿ ತಿಳಿಸಿದ್ದಾರೆ.
ಈ ತೂಗುಸೇತುವೆಯಿಂದಾಗಿ ಪೇರಡ್ಕ ಭಾಗದ ಸಾರ್ವಜನಿಕರು ಸುಮಾರು 20 ವರ್ಷಗಳ ಕಾಲ ಸುರಕ್ಷಿತ ಸಂಚಾರದ ಸೌಲಭ್ಯವನ್ನು ಪಡೆದು ಅಪಾರ ಪ್ರಯೋಜನವನ್ನು ಹೊಂದಿದ್ದಾರೆ. ಆ ದಿನಗಳಲ್ಲಿ ಡಾ. ಗಿರೀಶ್ ಭಾರದ್ವಾಜ್ ಅವರು ತೋರಿದ ಸಮಾಜಮುಖಿ ಕಾಳಜಿ, ಬದ್ಧತೆ ಮತ್ತು ಸಹಕಾರವನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸುವುದಾಗಿ ಹೇಳಿರುವ ಮಹಮ್ಮದ್ ಕುಂಜ ಗೂನಡ್ಕ ಅವರು, ಮೃತರ ಆತ್ಮಕ್ಕೆ ಸದ್ಗತಿ ಕೋರಿ ತಮ್ಮ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಅರ್ಪಿಸಿದ್ದಾರೆ.

