ವಿದ್ಯಾವಂತರು ಮತ್ತು ಸುಸಂಸ್ಕೃತರು ಎಂದು ಕರೆಸಿಕೊಳ್ಳುವ ಸುಳ್ಯದ ಜನತೆ, ಕಳೆದ ಎರಡು ದಶಕಗಳಿಂದ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಯ ಕುರಿತು ಇಲ್ಲಿ ಗಂಭೀರವಾಗಿ ಯೋಚಿಸಬೇಕಾಗಿದೆ.ನಮ್ಮ ಸಹನೆ ಮತ್ತು ಮೌನವೇ ನಮಗೆ ಶಾಪವಾಗಿದೆಯೇ ಎಂಬ ಬಗ್ಗೆ ನಾವಿನ್ನೂ ಒಂದು ನಿರ್ಧಾರಕ್ಕೆ ಬರದೇ ಹೋದರೆ ಮೈಸೂರಿಗೆ ಸಾಂಸ್ಕೃತಿಕನಗರಿ, ಮಡಿಕೇರಿಗೆ ಮಂಜಿನ ನಗರಿ ಚೆನ್ನಪಟ್ಟಣಕ್ಕೆ ಬೊಂಬೆಯನಾಡು ಎಂಬಂತೆಲ್ಲ ಇರುವ ಹೆಸರು ಸುಳ್ಯಕ್ಕೂ ಇದೆ ನೋಡಿ, ಶಿಕ್ಷಣ ನಗರಿ ಎಂದು ಅದು ಕತ್ತಲನಾಡು ಎಂದು ಆಗುವ ದಿನ ದೂರ ಇಲ್ಲ. ಸುಳ್ಯದವರ ಪಾಲಿಗಂತೂ ಈಗ ಅಧಿಕೃತವಾಗಿ ಅದು ಆಗಿ ಹೋಗಿದೆ.
ದೇಶದ ರಾಜಕೀಯದ ಬಗ್ಗೆ ಗಂಟೆಗಟ್ಟಲೆ ಚರ್ಚಿಸುವ ಅಕ್ಷರಸ್ಥರು, ತಮ್ಮೂರಿನ ಮೂಲಭೂತ ಸಮಸ್ಯೆಗಳಾದ ವಿದ್ಯುತ್ ವ್ಯತ್ಯಯ ಮತ್ತು ರಸ್ತೆ ಗುಂಡಿಗಳ ಬಗ್ಗೆ ಜನಪ್ರತಿನಿಧಿಗಳನ್ನು ಪ್ರಶ್ನಿಸಲು ಯಾಕೆ ಹಿಂಜರಿಯುತ್ತಿದ್ದಾರೆ ಎಂಬುದು ಇಲ್ಲಿನ ಮುಖ್ಯ ಪ್ರಶ್ನೆ. ಕೇವಲ ಮೆಸ್ಕಾಂ ಸಿಬ್ಬಂದಿಯ ಮೇಲೆ ಆಕ್ರೋಶ ಹೊರಹಾಕುವ ಬದಲು, ವಿಧಾನಸೌಧ ಮತ್ತು ಪಾರ್ಲಮೆಂಟಿಗೆ ಚುನಾಯಿತರಾಗುವವರು ಸರಕಾರದಿಂದ ನೇಮಿಸಲ್ಪಡುವ ನಿಗಮ ಮಂಡಳಿಗಳ ಮುಖಂಡರನ್ನು ಉತ್ತರದಾಯಿಯನ್ನಾಗಿ ಮಾಡಬೇಕಾದ ಅನಿವಾರ್ಯತೆ ಇದೆ.



ಮತದಾನದ ಸಮಯದಲ್ಲಿ ಅಭಿವೃದ್ಧಿಯನ್ನು ಬದಿಗಿಟ್ಟು ಜಾತಿ ಮತ್ತು ಪಕ್ಷದ ಭಾವನೆಗಳಿಗೆ ಮಾರುಹೋಗುವ ಪ್ರವೃತ್ತಿಯೇ ಇಂದಿನ ದುಸ್ಥಿತಿಗೆ ಕಾರಣ ಎನ್ನಲಾಗಿದೆ. ಕತ್ತಲೆಯಲ್ಲಿ ಕುಳಿತಾಗ ಅಲ್ಲಿ ಯಾವುದೇ ಜಾತಿ ಅಥವಾ ಪಕ್ಷದ ಭೇದವಿರುವುದಿಲ್ಲ ಎಂಬ ವಾಸ್ತವವನ್ನು ಮತದಾರರಿಗೆ ನೆನಪಿಸಬೇಕಿದೆ. ಜನಪ್ರತಿನಿಧಿಗಳು ಕೇವಲ ಶುಭ ಸಮಾರಂಭಗಳ ಅತಿಥಿಗಳಾಗಬಾರದು, ಬದಲಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿ ಹೊಂದಿರಬೇಕು ಎಂಬ ಆಶಯ ಜನರಿಂದ ವ್ಯಕ್ತ ಆಗುತ್ತಿದೆ.
ವ್ಯವಸ್ಥೆ ಸರಿಯಿಲ್ಲದಿದ್ದಾಗ ಜನಪ್ರತಿನಿಧಿಗಳನ್ನು ಬದಲಾಯಿಸುವ ಪ್ರಜಾಪ್ರಭುತ್ವದ ಶಕ್ತಿಯನ್ನು ಬಳಸಿಕೊಳ್ಳಲು ಇದು ಸಕಾಲವಾಗಿದೆ.






ಹಾರ-ತುರಾಯಿಗಳಿಗಿಂತ ಮನೆಯ ದೀಪ ಸರಿಯಾಗಿ ಉರಿಯುವಂತೆ ಮಾಡುವ ನಾಯಕತ್ವ ನಮಗೆ ಬೇಕಿದೆ. ಬದಲಾವಣೆ ನಮ್ಮ ಮತದಿಂದಲೇ ಆರಂಭವಾಗಬೇಕು ಮತ್ತು ಅಕ್ಷರಸ್ಥರು ಕೇವಲ ಪದವೀಧರರಾಗದೆ ಪ್ರಜ್ಞಾವಂತ ಮತದಾರರಾಗಬೇಕು ಎಂಬುದು ಸದ್ಯದ ಸ್ಥಿತಿ ಬಗ್ಗೆ ಮರುಕ ಹೊಂದಿರುವವರ ಕಳಕಳಿ.

