ಮೋದಿ ಭಯದಿಂದ ಚಡ್ಡಾ ನಾಜೂಕು ತಂತ್ರ: ಎಎಪಿ ಆರೋಪ

ಆಮ್ ಆದ್ಮಿ ಪಾರ್ಟಿಯ (AAP) ಆಂತರಿಕ ಬಿಕ್ಕಟ್ಟು ಈಗ ಬಹಿರಂಗಗೊಂಡಿದ್ದು, ಪಕ್ಷದ ಪ್ರಮುಖ ನಾಯಕ ಮತ್ತು ರಾಜ್ಯಸಭಾ ಸಂಸದ ರಾಘವ ಚಡ್ಡಾ ಅವರನ್ನು ರಾಜ್ಯಸಭೆಯ ಉಪ ನಾಯಕ ಸ್ಥಾನದಿಂದ ಕೆಳಗಿಳಿಸಲಾಗಿದೆ. ಅವರ ಬದಲಿಗೆ ಸಂಸದ ಅಶೋಕ್ ಮಿತ್ತಲ್ ಅವರನ್ನು ಈ ಸ್ಥಾನಕ್ಕೆ ನೇಮಿಸಲಾಗಿದೆ.


ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಜವಾಬ್ದಾರಿಯಿಂದ ರಾಘವ ಚಡ್ಡಾ ಅವರನ್ನು ಮುಕ್ತಗೊಳಿಸಿ, ಅಶೋಕ್ ಮಿತ್ತಲ್ ಅವರಿಗೆ ಆ ಹೊಣೆ ನೀಡಲು ಎಎಪಿ ನಿರ್ಧರಿಸಿದೆ. ಈ ಕುರಿತು ರಾಜ್ಯಸಭಾ ಸಚಿವಾಲಯಕ್ಕೆ ಪಕ್ಷವು ಪತ್ರ ಬರೆದಿದೆ.


ಈ ಬೆಳವಣಿಗೆಯ ನಂತರ ರಾಘವ ಚಡ್ಡಾ ಅವರು ಎಕ್ಸ್ (X) ನಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದು, ನನ್ನನ್ನು ಮೌನಗೊಳಿಸಲಾಗಿದೆ ಹೊರತು ಸೋಲಿಸಲಾಗಿಲ್ಲ ಎಂದು ಹೇಳಿದ್ದಾರೆ. ತಾವು ಸಾಮಾನ್ಯ ಜನರ ಪರವಾಗಿ ಧ್ವನಿ ಎತ್ತುತ್ತಲೇ ಇರುವುದಾಗಿ ಅವರು ತಿಳಿಸಿದ್ದಾರೆ.


ಕಳೆದ ಕೆಲವು ಸಮಯದಿಂದ ಪಕ್ಷದ ಕಾರ್ಯಕ್ರಮಗಳಲ್ಲಿ ರಾಘವ ಚಡ್ಡಾ ಅವರ ಗೈರುಹಾಜರಿ ಮತ್ತು ಮೌನವು ಪಕ್ಷದ ನಾಯಕತ್ವದಲ್ಲಿ ಅಸಮಾಧಾನ ಮೂಡಿಸಿತ್ತು ಎನ್ನಲಾಗಿದೆ. ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರಿಗೆ ಸಂಬಂಧಿಸಿದ ಪ್ರಮುಖ ವಿದ್ಯಮಾನಗಳ ಸಂದರ್ಭದಲ್ಲಿ ಅವರು ಮೌನ ವಹಿಸಿದ್ದು ಈ ಬದಲಾವಣೆಗೆ ಕಾರಣ ಎನ್ನಲಾಗುತ್ತಿದೆ.


ಆದರೆ, ಎಎಪಿ ಈ ಬದಲಾವಣೆಯನ್ನು ಸಾಮಾನ್ಯ ಪ್ರಕ್ರಿಯೆ ಎಂದು ಕರೆದಿದೆ. ಮೋದಿ ಭಯದಿಂದ ಚಡ್ಡಾ ಅವರು ಸಾಮಾನ್ಯ ವಿಷಯಗಳತ್ತ ಮಾತ್ರ ಗಮನಹರಿಸಿ ನಾಜೂಕಾಗಿ ಜಾರಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದರು ಹಾಗಾಗಿ ಹೊಸಬರಿಗೆ ಅವಕಾಶ ನೀಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.


ಒಟ್ಟಾರೆಯಾಗಿ, ಒಂದು ಕಾಲದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಾಘವ ಚಡ್ಡಾ ಅವರನ್ನು ಈಗ ಪಕ್ಷವು ಮೂಲೆಗುಂಪು ಮಾಡುತ್ತಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಆರಂಭವಾಗಿವೆ.

Leave a Reply

Discover more from

Subscribe now to keep reading and get access to the full archive.

Continue reading